ಪೆನಿನ್‍ಸುಲಾರ್ ನೈಸ್  -
	ಕರ್ನಾಟಕದಲ್ಲಿರುವ ನೈಸ್ ಮತ್ತು ಗ್ರ್ಯಾನೈಟ್ ಗುಂಪಿನ ಶಿಲೆಗಳ ಹೆಸರು.  ದಕ್ಷಿಣ ಭಾರತದ ಬಹುಭಾಗವನ್ನು ಇದು ಆಕ್ರಮಿಸಿದೆ.  ವಿಧವಿಧವಾದ ನೈಸ್ ಮತ್ತು ಗ್ರ್ಯಾನೈಟುಗಳು ಈ ಗುಂಪಿನಲ್ಲಿವೆ.  ಬಲು ಸೊಗಸಾಗಿ ಗೀರು ರಚನೆಯನ್ನು ಹಲವಲ್ಲಿ ಕಾಣಬಹುದು.  ಕಪ್ಪು ಮತ್ತು ತೆಳು ಬಣ್ಣದ ಗೀರುಗಳು ಒಂದಾದ ಮೇಲೊಂದು ಕಂಡುಬರುತ್ತವೆ.  ಪ್ರತಿಯೊಂದು ಗೀರೂ ಸೂಕ್ಷ್ಮವಾಗಿದ್ದು, ರಿಬ್ಬನ್ನಿನಂತಿರುತ್ತದೆ.  ಅನೇಕ ವೇಳೆ ಭೂತಗನ್ನಡಿಯಂತೆ ಉಬ್ಬಿಕೊಂಡಿರುವುದೂ ಉಂಟು.  ಕಪ್ಪು ಭಾಗದಲ್ಲಿ ಬಯೊಟೈಟ್ ಕ್ವಾಟ್ರ್ಸ್ ಮತ್ತು ಫೆಲ್ಸ್‍ಫಾರ್ ಖನಿಜಗಳೂ ಇರುತ್ತವೆ.  ಕೆಲವು ಕಡೆ ಗೆರೆಗಳು ಅಸ್ತವ್ಯಸ್ಥವಾಗಿರುವುದುಂಟು.  ಇವನ್ನು ಗ್ರ್ಯಾನಿಟಿಕ್ ನೈಸ್ ಅಥವಾ ನೈಸಿಕ್ ಗ್ರ್ಯಾನೈಟ್ ಎಂದು ಕರೆಯುತ್ತಾರೆ.  ಗ್ರ್ಯಾನೈಟ್ ಶಿಲಾದ್ರವ ಹಾರನ್‍ಬ್ಲೆಂಡ್ ಪದರು ಶಿಲೆಯ ಪದರಗಳ ಮಧ್ಯೆ ಪ್ರವಹಿಸಿ ತನ್ನ ಅಕ್ಕಪಕ್ಕದಲ್ಲಿರುವ ಹಾರನ್‍ಬ್ಲೆಂಡ್ ಖನಿಜವನ್ನು ತನ್ನಲ್ಲಿ ಅಲ್ಪಸ್ವಲ್ಪ ಜೀರ್ಣಿಸಿಕೊಂಡು ಕ್ರಮೇಣ ಪೆನಿನ್ ಸುಲಾರ್ ನೈಸ್ ಆಗಿ ಮಾರ್ಪಡುತ್ತದೆ.  ಈಗಲೂ ಈ ಶಿಲೆಯ ಮಧ್ಯೆ ಅನೇಕ ಕಡೆಗಳಲ್ಲಿ ಹಾರನ್‍ಬ್ಲೆಂಡ್ ಪದರು ಶಿಲೆಯ ಅನ್ಯಶಿಲೆಗಳಿರುವುದರಿಂದ ಈ ತೆರನಾದ ಉತ್ಪತ್ತಿಯನ್ನು ಸೂಚಿಸಲಾಗಿದೆ.  ಕರ್ನಾಟಕ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಅಭಿಪ್ರಾಯದಲ್ಲಿ ಇವು ಧಾರವಾಡ ಪದರು ಶಿಲಾಸ್ತೋಮವನ್ನು ಛೇದಿಸುವುದಕ್ಕಾಗಿ ಅದಕ್ಕಿಂತಲೂ ಈಚಿನ ಶಿಲಾವರ್ಗವೆಂದಿದೆ.
(ಎಸ್.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ